ಸಿ.ಎನ್. ಮಂಜುನಾಥ್
ಕುರಿತು

ಸಿ.ಎನ್. ಮಂಜುನಾಥರವರ ಬಗ್ಗೆ
ಡಾ. ಸಿ.ಎನ್. ಮಂಜುನಾಥ್ ಅವರು ಅತ್ಯಂತ ಸಾಧನೆಗೈದ ಹಿರಿಯ ಹೃದ್ರೋಗ ತಜ್ಞ ಮತ್ತು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕರು. ಅವರು ಸ್ಥಳೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ ಹೃದ್ರೋಗ ಹಾಗು ವೈದ್ಯಕೀಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಡಾ. ಮಂಜುನಾಥ್ ಅವರ ನಾಯಕತ್ವವು ಜಯದೇವ ಸಂಸ್ಥೆಯನ್ನು ಅದ್ಭುತವಾಗಿ ಮಾರ್ಪಡಿಸಿದೆ. ಆಸ್ಪತ್ರೆಯಲ್ಲಿನ ಹಾಸಿಗೆಗಳ ಸಾಮರ್ಥ್ಯವನ್ನು 330 ರಿಂದ 2000ರಷ್ಟು ಹೆಚ್ಚಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ, ಸಂಸ್ಥೆಯು ಆಗ್ನೇಯ ಏಷ್ಯಾದ ಅತಿದೊಡ್ಡ ಹೃದಯ ಆರೈಕೆ ಕೇಂದ್ರಗಳಲ್ಲಿ ಒಂದಾಗಿದೆ. ಅವರ ನಾಯಕತ್ವದಲ್ಲಿ ಆಸ್ಪತ್ರೆಯು ಕಳೆದ 17 ವರ್ಷಗಳಲ್ಲಿ 75 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಿದೆ ಮತ್ತು 8 ಲಕ್ಷ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ.
ಡಾ. ಮಂಜುನಾಥ್ ಅವರು ಆರೊಗ್ಯ ರಕ್ಷಣೆಯ ಜೊತೆಗೆ ಮಾನವೀಯತೆಗೆ ಹೆಸರುವಾಸಿಯಾಗಿದ್ದಾರೆ, ಪ್ರತಿಯೊಬ್ಬ ನಿರ್ಗತಿಕ ರೋಗಿಗೆ ಹಣಕಾಸಿನ ಅಡೆತಡೆಗಳನ್ನು ಲೆಕ್ಕಿಸದೆ ಗುಣಮಟ್ಟದ ಚಿಕಿತ್ಸೆ ದೊರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರು ಹಲವಾರು ದತ್ತಿ ಸಂಸ್ಥೆಗಳಿಂದ ಜಯದೇವ ಆಸ್ಪತ್ರೆಗೆ ಅನುದಾನ ಕೋರುವ ಮೂಲಕ ಬಡ ರೋಗಿಗಳ ಚಿಕಿತ್ಸೆಗೆ ನೆರವಾಗಿದ್ದಾರೆ. ಮತ್ತು ತುರ್ತು ರೋಗಿಗಳಿಗೆ ತಕ್ಷಣದ ಆರೈಕೆಯನ್ನು ಒದಗಿಸಲು “ಚಿಕಿತ್ಸೆ ಮೊದಲು – ಹಣ ನಂತರ” ಎಂಬ ಅದ್ಭುತ ಪರಿಕಲ್ಪನೆಗಳನ್ನು ಜಾರಿಗೆ ತಂದಿದ್ದಾರೆ.